ಕೃಷ್ಣಾ ನದಿ 
ದಕ್ಷಿಣ ಭಾರತದ ಒಂದು ದೊಡ್ಡ ನದಿ. ಗೋದಾವರಿ ಕಾವೇರಿಗಳಂತೆ ಇದೂ ಭಾರತದ ಪರ್ಯಾಯದ್ವೀಪಭಾಗದಲ್ಲಿ ಪಶ್ಚಿಮದಿಂದ ಪೂರ್ವಾಭಿಮುಖವಾಗಿ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಉದ್ದದಲ್ಲಿ ಇದು ಕಾವೇರಿಗಿಂತ ದೊಡ್ಡದು; ಗೋದಾವರಿಗಿಂತ ಚಿಕ್ಕದು. ಆದರೆ ಎರಡು ದೊಡ್ಡ ಉಪನದಿಗಳಾದ ಭೀಮಾ ಮತ್ತು ತುಂಗಭದ್ರೆಯನ್ನೂ ಸೇರಿಸಿಕೊಂಡರೆ ಇದರ ಜಲಾನಯನ ಭೂಮಿಯ ವಿಸ್ತಾರ ಉಳಿದೆರಡು ನದಿಗಳ ಜಲಾನಯನ ಭೂಮಿಗಳಿಗಿಂತ ಹೆಚ್ಚು. ಕೃಷ್ಣಾ ನದಿಯ ಉದ್ದ 1,400 ಕಿ.ಮೀ. ಜಲೋತ್ಸಾರಣ ಪ್ರದೇಶ 2,59,000 ಚ.ಕೀ.ಮೀ.        				   
  (ಆರ್.ಪಿ.ಎಸ್.)

	ಕೃಷ್ಣಾ ನದಿ ಹುಟ್ಟುವುದು ಪಶ್ಚಿಮ ಘಟ್ಟದಲ್ಲಿ, ಮಹಾಬಲೇಶ್ವರ ಗಿರಿಧಾಮದ ಉತ್ತರದಲ್ಲಿ, ಸಮುದ್ರಮಟ್ಟದಿಂದ ಸುಮಾರು 1,338 ಮೀ. ಎತ್ತರದಲ್ಲಿ. ಇದರ ಉಗಮ ಸ್ಥಾನಕ್ಕೂ ಅರಬ್ಬೀ ಸಮುದ್ರಕ್ಕೂ ಕೇವಲ 64 ಕಿ.ಮೀ. ದೂರ. ಹುಟ್ಟಿದೆಡೆಯಿಂದ ಕುರುಂದವಾಡದವರೆಗೆ ಇದು ದಕ್ಷಿಣಾಭಿಮುಖವಾಗಿ ಹರಿಯುತ್ತದೆ. ಬೆಟ್ಟಗಳ ಎಡೆಯಲ್ಲಿ ವಂಕಿಯಂತೆ ವೇಗವಾಗಿ ನುಸುಳುವ ನದಿಗೆ ಸಾತಾರಾ ಜಿಲ್ಲೆಯ ಕರ್ಹಾಡ್ ಬಳಿ ಬಲಗಡೆಯಿಂದ ಬಂದು ಸೇರುವ ನದಿ ಕೊಯ್ನಾ. ಇದು ಮಹಾಬಲೇಶ್ವರಕ್ಕೆ ಪಶ್ಚಿಮದಲ್ಲಿ ಹುಟ್ಟುತ್ತದೆ.  ಕೃಷ್ಣೆಯಲ್ಲಿ ಸಂಗಮಿಸುವ ಇನ್ನೊಂದು ನದಿ ವರ್ಣಾ. ಇದು ಕೃಷ್ಣಾ ನದಿಯನ್ನು ಕೂಡುವುದು ಸಾಂಗ್ಲಿಯ ಬಳಿ. ಅನಂತರ ಸಿಕ್ಕುವ ಸ್ಥಳವೇ ಕುರುಂದವಾಡ. ಇಲ್ಲಿ ಕೃಷ್ಣೆಯನ್ನು ಸೇರುವ ನದಿ ಪಂಚಗಂಗಾ. ಇದೂ ಕೃಷ್ಣೆಯ ಬಲಗಡೆಯಿಂದ ಹರಿದು ಬರುತ್ತದೆ.

ಕುರುಂದವಾಡಿಯ ಬಳಿಯಲ್ಲಿ ನದಿಯ ದಿಕ್ಕು ಬದಲಾಗುತ್ತದೆ. ಅಲ್ಲಿಂದ ಮುಂದಕ್ಕೆ ಅದರದು ಪೂರ್ವಾಭಿಗಮನ. ಸ್ವಲ್ಪ ದೂರ ಕರ್ಣಾಟಕದ ಗಡಿಗೆ ಸೋಕಿ ಹರಿದು ಆಮೇಲೆ ಈ ರಾಜ್ಯವನ್ನು ಪ್ರವೇಶಿಸಿ ಬೆಳಗಾಂವಿ ಬಿಜಾಪುರ ಜಿಲ್ಲೆಗಳಲ್ಲಿ ಕ್ರಮಿಸುತ್ತದೆ. ಈ ಘಟ್ಟದಲ್ಲಿ ಕೃಷ್ಣೆಯನ್ನು ಸೇರುವ ನದಿಗಳು ಘಟಪ್ರಭಾ ಮತ್ತು ಮಲಪ್ರಭಾ. ಇವೂ ಪಶ್ಚಿಮ ಘಟ್ಟದಲ್ಲಿ ಜನಿಸುವ ನದಿಗಳೇ. ಇವು ಸಂಗಮಿಸುವುದೂ ಕೃಷ್ಣೆಯ ಬಲಗಡೆಯಲ್ಲೇ.

	ಘಟ್ಟ ಸೋಪಾನವನ್ನಿಳಿಯುವಾಗ ನದಿ ಬಹಳ ವೇಗವಾಗಿ ಹರಿಯುತ್ತದೆ. ಸಾತಾರಾ ಜಿಲ್ಲೆಯಲ್ಲೂ ಕರ್ಣಾಟಕದಲ್ಲೂ ಇದರ ನೀರು ಬೇಸಾಯಕ್ಕೆ ಸ್ವಲ್ಪ ಮಟ್ಟಿಗೆ ಒದಗಿ ಬಂದಿದೆ. ಬೆಳಗಾಂವಿ ಬಿಜಾಪುರ ಜಿಲ್ಲೆಗಳಲ್ಲಿ ನದಿಯ ದಂಡೆಗಳು ಎತ್ತರವಾಗಿವೆ. ನದಿಯಲ್ಲಿ ಹಲವಾರು ನಡುಗಡ್ಡೆಗಳೂ ಉಂಟು.

	ಬಿಜಾಪುರ ಜಿಲ್ಲೆಯನ್ನು ದಾಟಿ ರಾಯಚೂರು ಜಿಲ್ಲೆಯ ಉತ್ತರ ಸೆರಗಿನಲ್ಲಿ ಜಾರುವಾಗ ನದಿಯ ಔನ್ನತ್ಯ ಇನ್ನಷ್ಟು ನಷ್ಟವಾಗುತ್ತದೆ. ಮೂರು ಮೈಲಿಗಳ ದೂರದಲ್ಲಿ 122 ಮೀಟರುಗಳಷ್ಟು ಕೆಳಕ್ಕೆ ಇಳಿಯುವ ನದಿಯ ವೇಗ ಬಲು ಅಧಿಕ. ಬಂಡೆಗಳ ಮೇಲೆ ಜಿಗಿದು ಹರಿಯುವ ನದಿಯ ಅಬ್ಬರ ವಿಪರೀತ. ಅದು ತುಂತುರಿನ ರಾಶಿಯನ್ನು ಸಿಂಪಡಿಸುತ್ತ ಸಾಗುತ್ತದೆ.

	ಕೃಷ್ಣಾ ನದಿ ಕರ್ಣಾಟಕ ಸೀಮೋಲ್ಲಂಘನೆ ಮಾಡಿ ಆಂಧ್ರಪ್ರದೇಶವನ್ನು ಪ್ರವೇಶಿಸುವ ಎಡೆಯಲ್ಲಿ ಅದರ ಎಡದಂಡೆಯ ಕಡೆಯಿಂದ ಬಂದು ಸೇರುವ ಉಪನದಿ ಭೀಮಾ, ಇದೂ ಮಹಾರಾಷ್ಟ್ರದಲ್ಲಿ ಹುಟ್ಟಿ ಕರ್ಣಾಟಕದಲ್ಲಿ ಹರಿದು ಬರುತ್ತದೆ. ನೀರಾ, ಘೋದ್ ಮತ್ತು ಸೀಮಾ- ಇವು ಭೀಮಾದ ಉಪನದಿಗಳು.

	ಆಂಧ್ರಪ್ರದೇಶದಲ್ಲಿ, ಕರ್ನೂಲಿಗೆ ಈಶಾನ್ಯದಲ್ಲಿ, ಕೃಷ್ಣಾ ನದಿಯೊಂದಿಗೆ ಸೇರುವ ಮುಖ್ಯ ನದಿ ತುಂಗಭದ್ರಾ. ಕೃಷ್ಣಾ-ತುಂಗಭದ್ರಾ ಸಂಗಮದಿಂದಾಚೆಗೆ ಅದು ಕರ್ನೂಲು ಮತ್ತು ಗುಂಟೂರು ಜಿಲ್ಲೆಗಳ ಗಡಿಯಲ್ಲೇ ಹರಿಯುತ್ತದೆ. ಇಲ್ಲಿ ಅದರ ಪಾತ್ರ ಬಲು ಆಳ; ಬಲು ಕಡಿದು. ನಲ್ಲಮಲೆ ಬೆಟ್ಟಗಳ ನಡುವೆ ಜಿಗಿದು ಈಶಾನ್ಯಾಭಿಮುಖವಾಗಿ ಹರಿಯುವ ಕೃಷ್ಣಾನದಿಯ ಕೊಟ್ಟ ಕೊನೆಯ ಉಪನದಿ ಮೂಸಿ. ಈ ನದಿ ನಲ್ಗೊಂಡದ ವಜೀರಾಬಾದ್ ಬಳಿಯಲ್ಲಿ ಕೃಷ್ಣಾನದಿಯನ್ನು ಕೂಡುತ್ತದೆ.

	ಪೂರ್ವಘಟ್ಟಗಳ ಪ್ರದೇಶದಲ್ಲಿ ನದಿಯ ದಿಕ್ಕು ಮತ್ತೆ ಬದಲಾಗುತ್ತದೆ. ಈಶಾನ್ಯದ ಕಡಗೆ ಹರಿಯುತ್ತಿದ್ದ ನದಿ ಆಗ್ನೇಯದ ಕಡೆಗೆ ಹರಿಯಲಾರಂಭಿಸುತ್ತದೆ.  ಕೃಷ್ಣಾ ಜಿಲ್ಲೆಯಲ್ಲಿ ಅದರ ಗತಿ ಬಲು ಮಂದ. ಅದು ತನ್ನ ಪ್ರವಾಹದೊಂದಿಗೆ ಹೊತ್ತು ತರುವ ಮಣ್ಣು ಅಗಾಧ. ಪ್ರವಾಹ ಕಾಲದಲ್ಲಿ ದಿನ ಒಂದಕ್ಕೆ ಸು. 7ಳಿ ಚ.ಕಿ.ಮೀ. ಅಗಲ ಮತ್ತು 30 ಸೆಂ.ಮೀ. ದಪ್ಪ ಆಗುವಷ್ಟು ಮಣ್ಣನ್ನು ತಂದು ಗುಡ್ಡೆ ಹಾಕುತ್ತದೆಂದು ಅಂದಾಜು ಮಾಡಲಾಗಿದೆ. ಕೃಷ್ಣಾ ನದಿಯ ಮುಖಜ ಭೂಮಿ ಸಮುದ್ರದೊಳಕ್ಕೆ ಚಾಚಿಕೊಂಡಿದೆ. ವಿಜಯವಾಡವೇ ಈ ಭೂಮಿಯ ಶಿರಃಪ್ರದೇಶ. ಇಲ್ಲೊಂದು ಆಣೆಕಟ್ಟನ್ನು ಕಟ್ಟಲಾಗಿದೆ. ಕರಾವಳಿ ರೈಲ್ವೆ ಸೇತುವೆ ಇರುವುದು ಈ ಆಣೆಕಟ್ಟಿನ ಕೆಳಗಡೆಯಲ್ಲಿ. ಆಣೆಕಟ್ಟಿನ ಮೇಲ್ಗಡೆಯ ನದೀಭಾಗ ನೌಕಾಸಂಚಾರಕ್ಕೆ ಯೋಗ್ಯವಾಗಿಲ್ಲ. ವಿಜಯವಾಡದಿಂದ ಮುಂದಕ್ಕೆ ನದಿ ಹಲವು ಕವಲುಗಳಾಗಿ ಒಡೆಯುತ್ತದೆ. ಮಚಲಿಪಟ್ಟಣ ಇರುವುದು ಉತ್ತರದ ಕವಲು ಸಮುದ್ರವನ್ನು ಸೇರುವೆಡೆಯಲ್ಲಿ.

	ಕೃಷ್ಣಾ ನದಿಯ ಮುಖಜ ಭೂಮಿಯ ಕವಲುಗಳೂ ಅವುಗಳ ನಡುವೆ ಹರಿಯುವ ನೀರಾವರಿ ಕಾಲುವೆಗಳೂ ಜಲಮಾರ್ಗಗಳಾಗಿಯೂ ಉಪಯುಕ್ತವಾಗಿವೆ. ಕೃಷ್ಣಾ ಗೋದಾವರಿ ಜಿಲ್ಲೆಗಳ ನಡುವೆ ಇವು ಒಳ್ಳೆಯ ಸಂಪರ್ಕ ಮಾಧ್ಯಮಗಳು.

ಆಂಧ್ರಪ್ರದೇಶದ ನಲ್ಗೊಂಡ ಜಿಲ್ಲೆಯ ಮೀರ್ಯಾಲ್ಗುಡ ತಾಲ್ಲೂಕಿನಲ್ಲಿ ನಂದಿಕೊಂಡ ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿತವಾಗುತ್ತಿರುವ ನಾಗಾರ್ಜುನ ಸಾಗರ ಕಟ್ಟೆ ಸಂಪೂರ್ಣವಾದಾಗ 110 ಚ.ಮೈ.ಗಳ ವಿಶಾಲ ಪ್ರದೇಶದಲ್ಲಿ ನೀರು ಶೇಖರವಾಗುತ್ತದೆ. ಇದು ಭಾರತದ ಅತ್ಯಂತ ದೊಡ್ಡ, ವಿಶ್ವದಲ್ಲಿ ಮೂರನೆಯ ದೊಡ್ಡ ಮಾನವನಿರ್ಮಿತ ಸಾಗರವಾಗುತ್ತದೆ. ವಿಶ್ವದಲ್ಲೇ ಇದು ಅತ್ಯಂತ ಉನ್ನತವಾದ, ಅತಿ ದೊಡ್ಡದಾದ ಕಲ್ಲುಕಟ್ಟಡದ ಕಟ್ಟೆ. ನದಿಯ ಆಚೀಚೆ ದಂಡೆಗಳಲ್ಲಿ ಎರಡು ನೀರಾವರಿ ಕಾಲುವೆಗಳೂ ತಲಾ 50,000 ಕಿವಾ. ಸಾಮಥ್ರ್ಯದ 8 ವಿದ್ಯುದುತ್ಪಾದಕ ಘಟಕಗಳೂ ಇರುತ್ತವೆ. ಯೋಜನೆಯ ಮೊದಲ ಹಂತದಲ್ಲಿ ನೀರಾವರಿಗೆ ಒಳಪಡುವ ನೆಲ 20.54 ಲಕ್ಷ ಎಕರೆ. ಕಬ್ಬು, ಹತ್ತಿ, ಮೆಣಸಿನಕಾಯಿ, ನೆಲಗಡಲೆ, ಮುಸುಕಿನಜೋಳ ಮುಂತಾದ ಬೆಳೆಗಳಿಗೆ ಇದು ಉಪಯುಕ್ತ. ಯೋಜನೆಯ ಮೊದಲ ಹಂತದಲ್ಲಿ ಸುಮಾರು 8 ಲಕ್ಷ ಟನ್ ಆಹಾರ ಧಾನ್ಯ ಬೆಳೆಯಲಾಗುವುದೆಂದು ನಿರೀಕ್ಷಿಸಲಾಗಿದೆ. ಈ ಯೋಜನೆ ಸಂಪೂರ್ಣವಾದಾಗ ಒಟ್ಟು 12 ಲಕ್ಷ ಟನ್ ಆಹಾರೋತ್ಪತ್ತಿಯಾಗುತ್ತದೆ.

ಕರ್ಣಾಟಕದಲ್ಲಿ ಬಿಜಾಪುರ ಜಿಲ್ಲೆಯ ಬಾಗೆವಾಡಿ ತಾಲ್ಲೂಕಿನ ಆಲಮಟ್ಟಿಯ ಒಂದು ಕಟ್ಟೆಯನ್ನೂ ಗುಲ್ಬರ್ಗ ಜಿಲ್ಲೆಯ ಸುರಪುರ ತಾಲ್ಲೂಕಿನ ನಾರಾಯಣಪುರದ ಬಳಿ ಇನ್ನೊಂದು ಕಟ್ಟೆಯನ್ನೂ ನಿರ್ಮಿಸುವ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ಈ ಯೋಜನೆಯಿಂದ ಬಿಜಾಪುರ ಗುಲ್ಬರ್ಗ ಮತ್ತು ರಾಯಚೂರು ಜಿಲ್ಲೆಗಳ ವಿಶಾಲ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಏರ್ಪಡುತ್ತದೆ.

	ರಾಜಮಹೇಂದ್ರದಲ್ಲಿ ಗೋದಾವರಿ ಆಣೆಕಟ್ಟನ್ನು ಕಟ್ಟಿದ ಆರ್ಥರ್ ಕಾಟನನೇ ವಿಜಯವಾಡದಲ್ಲಿ ಕೃಷ್ಣಾ ನದಿಗೆ ಒಂದು ಆಣೆಕಟ್ಟನ್ನು ಕಟ್ಟಿದ್ದಾನೆ. ಅದರ ಎರಡು ದಡಗಳಲ್ಲಿ ಎರಡು ನಾಲೆಗಳಿವೆ. 1852-55ರಲ್ಲಿ ನಿರ್ಮಾಣವಾದ ಈ ಆಣೆಕಟ್ಟನ್ನು 1935ರಲ್ಲಿ ಎತ್ತರಿಸಲಾಯಿತು. 1962ರಲ್ಲಿ ಹೊಸದಾಗಿ ಪ್ರಕಾಶಂ ಬಾರೆಜ್ ಎಂಬ ಹೊಸ ಅಡ್ಡಗಟ್ಟು ಕಟ್ಟಲಾಯಿತು. ಈ ಆಣೆಕಟ್ಟೆಯ ಕಾಲುವೆಗಳಿಂದ ಒಟ್ಟು 12,19,606 ಎಕರೆಗಳಿಗೆ ನೀರಾವರಿ ಸೌಲಭ್ಯ ಒದಗಿದೆ.

	ಈ ಕಾಮಗಾರಿಗಳ ಮೇಲೆ ಸರ್ಕಾರ ಮಾಡಿರುವ ಖರ್ಚು ರೂ.2.25 ಕೋಟಿ. ಈ ಕುದುರಿನಲ್ಲಿ ಬೆಳೆಯುವ ಧಾನ್ಯಗಳ ಬೆಲೆ ರೂ.25 ಕೋಟಿ. ವರ್ಷದಲ್ಲಿ 10 ತಿಂಗಳ ಕಾಲ ದೋಣಿಗಳು ನಾಲೆಯಲ್ಲಿ ಸಂಚರಿಸಿ 2 ಲಕ್ಷ ಜನರನ್ನೂ ರೂ. 35 ಕೋಟಿ ಬೆಲೆಯ ಧಾನ್ಯವನ್ನೂ ರೂ.2 ಕೋಟಿ ಬೆಲೆಯ ಮರವನ್ನೂ ಸಾಗಿಸುತ್ತವೆ. 				
	(ಎಚ್.ಸಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ